ದುರಿತ ಜೀಮೂತವಾತ

ದುರಿತ ಜೀಮೂತವಾತ
ಪೊರಿಯಯ್ಯ ನಿನಗೆ ನಿರುತ
ಧರಣಿಯೊಳಗೆ ವಿಸ್ತರಿಸಿ ಬಲ್ಲವರಾರು
ಗುರುವೆ ನಿಜ ನಮಿತರ ಸುರತರುವೆ

ನಂಬಿದೆ ನಿನ್ನ ಪಾದವಂಬುಜವನು ಗಾಲ
ಬೆಂಬಿಡದಲೆ ನಾನೆಂಬೋದು ಬಿಡಿಸಿಂದು
ಬೆಂಬಲವಾಗು ಆರೆಂಬ ಖಳರ ನೀಗು
ಇಂಬಾಗಿ ನೋಡು ದಿವ್ಯಾಂಬಕದಿಂದ ವೇಗ
ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ
ಸಂಭ್ರಮದಲಿ ಹರಿದೊಂಬಲ ಬಯಸುವ
ಹಂಬಲಿಗರ ಕೂಡ ಇಂತು ತೋರು ಬಲು
ಗಂಭೀರ ಕರುಣಿ ||1||

ಎಣೆಗಾಣೆÉ ನಿಮಗೆ ಕುಂಭಿಣಿಯೊಳಗೆಲ್ಲ ಯತಿ
ಮಣಿಯೆ ರಾಮವ್ಯಾಸರ
ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ
ಮನಸಿಜ ಶರಭೀಮ ಮನದಣೆ ಗುಣಿಸಿ ಈ
ದಿನ ಮೊದಲು ಪಿಡಿದು ಜನುಮ ಜನುಮದ ಸಾ
ಧನ ಫಲಿಸುತು ಯೋಚನೆಗೊಳಲ್ಯಾಕೆ
ಅನುಮಾನ ಸಲ್ಲದು ಘನತರ ಕೀರ್ತಿ ನೂರಾರಕೆ
ಎಣಿಕೆ ಇಲ್ಲದೆ ಮೆರೆವ ದಿನಕರ ಪ್ರಭ ಕಾಯ ||2||

ವರಹಜೆ ಸರಿತೆಯಲ್ಲಿ ಸ್ಥಿರನಾಗಿ ನಿಂದು ಕ್ಷಣ
ಸುರರಿಂದಾರಾಧನೆ ಸರಸರನೆ ಹಗಲು
ಇರಳು ಕೈಗೊಳುತ ವಕ್ಕಾರಗಳು ಹರಸಿ ಸುಂ
ದರ ವರಗಳನಿತ್ತು ಚಿರಕಾಲ ಬಿಡದಲೆ
ಪರವಾದಿಯ ಬಲ ಉರುದಲ್ಲಣ ಪೂ
ತುರೆ ಸುಧೇಂದ್ರರ ಕರಾರವಿಂದಜ
ಅರಸರಸರ ಪ್ರಿಯ ವಿಜಯವಿಠ್ಠಲನ
ಬಿರಿಯ ಹೊಯಿಸುವ ಧೀರಾ ಗುರು ರಾಘವೇಂದ್ರ||3||

Leave a Comment

Your email address will not be published. Required fields are marked *