ತಿಮ್ಮ ನಿನ್ನಯ ಪಾದ ಒಮ್ಮಿಗಾದರು ನೆನೆದು

ತಿಮ್ಮ ನಿನ್ನಯ ಪಾದ ಒಮ್ಮಿಗಾದರು ನೆನೆದು
ಕರ್ಮ ಪೋಪುವುದು ಎಂತೊ
ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ
ಕಮ್ಮಗೋಲನ ಬದುಕೀಲಿ ರಂಗಾ

ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು
ಬ್ಬಾಳುತನದಿಂದ ಕುಳಿತು
ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ
ಹೇಳು ಇನ್ನೊಮ್ಮೆ ಎನುತಾ
ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು
ಪೇಳುವೆನು ಕೈತಿರುವುತಾ
ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು
ಕೀಳು ವಾರ್ತೆಯ ತಾಹದೊ ಮನಸು||1||

ಧರೆಯನಾಳುವವನ ಸಮ್ಮುಖದಲ್ಲಿ ನಿಂದು
ಕರವೆರಡು ನೊಸಲಿಗೆ ಚಾಚಿ
ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ
ಸರಿ ಮಿಗಿಲು ಯಿಲ್ಲವೆಂದೂ
ಮರಿಯದಲೆ ಸಲಹುವದು ಮಹಾತ್ಮನಹುದೆಂದು
ನರನಾಲಿಗೆ ತುತಿಸಿತು
ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು
ಮರಪು ಬಂದೊದಗಿಹದೊ ರಂಗಾ||2||

ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು
ಬಿಸಿಲು ಬೆಳದಿಂಗಳೆನ್ನದೆ
ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ
ಕುಸಿದು ಕನಿಷ್ಠನಾಗಿ
ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ
ಹಿಸುಕಿ ಹಿಂಸೆಗಳ ಬಿಡಿಸಿ
ಹಸನಾಗಿ ನಿನ್ನ ನಾಮಾಮೃತವನುಣದೆ ನಾ
ಮುಸುರೆ ಎಂಜಲು ಸವಿದೆನೊ ರಂಗಾ ||3||

ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ
ಅನ್ನಿಗರ ಕೊಂಡಾಡುತ
ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ
ಎನ್ನ ಕುಲ ಉದ್ಧಾರಕಾ
ಸನ್ನುತಿಸಿ ನಾ ನಾಕ ಬಗೆಯಿಂದ ಮರಿಯದಲೆ
ಕುನ್ನಿಯಂತೆ ಕಾಯಿದೆನೊ
ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು
ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ ||4||

ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ
ಯಿಂದ ಹರಿ ರಾಮಕೃಷ್ಣ
ಇಂದಿರಾರಮಣ ಶರಣಾಗತವತ್ಸಲ
ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ
ಎಂದು ಸ್ಮರಿಸದೆ ಘೋರ
ಅಂಧ ಕೂಪದಿ ಹೊರಳಿದೆ
ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ
ತಂದೆ ನೀನೆ ಕಾವುದೋ ಹರಿಯೆ ||5||

Leave a Comment

Your email address will not be published. Required fields are marked *