ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ||1||
ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ||2||
ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ||3||
ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ||4||
ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ||5||
ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ
ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ
ದಯದಿ ರಾಮರಾಮ||6||
ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ||7||
ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ||8||
ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ||9||
ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ||10||
ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ||11||
ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ||12||
ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ ||13||
ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ||14||
ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ ||15||
ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ ||16||
ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ||17||
ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ
ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ||18||
ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ
ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ||19||
ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ||20||
ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ||21||
ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ||22||
ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ
ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ ||23||
ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ
ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ ||24||
ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ
ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ ||25||
ವಿಜಯ ವಿಠಲ ಇರಬೇಕು.
Virtual ತಪ್ಪು.