ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ
ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ

ಕುಣಿದು ನಿನ್ನ ಮೆಚ್ಚಿಸುವೆನೆ |
ಫಣಿಹಾರನೈಯನನ ಜನಕಾ |
ಮಣಿದು ನಿನ್ನ ಮೆಚ್ಚಿಸುವೆನೆ |
ಸನಕಾದಿಗಳ ಸುಪ್ರೇಮಾ ||1||

ಅನ್ನವಿತ್ತು ಮೆಚ್ಚಿಸುವೆನೆ |
ಘನ್ನ ನಿತ್ಯ ತೃಪ್ತ ನೀನು |
ಹೆಣ್ಣನಿತ್ತು ಮೆಚ್ಚಿಸುವೆನೆ |
ಹೆಣ್ಣುರೂಪ ನೀನೆ ಸ್ವಾಮಿ ||2||

ಅಪ್ಪ ನಿನ್ನ ಮೆಚ್ಚಿಸುವೆನೆ |
ದರ್ಪಾಕ ಬೊಮ್ಮನ ತಂದೆ |
ಅಪ್ಪ ನಿನ್ನ ಮೆಚ್ಚಿಸುವೆನೆ |
ಸುಪ್ಪಾಣಿ ರಮೆಯರಸಾ ||3||

ಪಾಲು ಕುಡಿಸಿ ಮೆಚ್ಚಿಸುವೆನೆ |
ಪಾಲಸಾಗರ ಸದನ ನೀನು |
ಮಾಲೆ ಹಾಕಿ ಮೆಚ್ಚಿಸುವೆನೆ |
ಮಾಲೆ ಕೌಸ್ತಭ ಭೂಷಣಾ||4||

ಸೇವೆ ಮಾಡಿ ಮೆಚ್ಚಿಸುವೆನೆ |
ಪಾವಮಾನಿ ತಾತ ನೀನು |
ಆವದೊ ಕಾಣೆನೋ ಎನ್ನ
ಕಾವುದು ವಿಜಯವಿಠ್ಠಲಾ ||5||

Leave a Comment

Your email address will not be published. Required fields are marked *