ಅಘಟಿತ ಘಟಿತನ ಒಲವಿನ ಶಿಶು

ಅಘಟಿತ ಘಟಿತನ ಒಲವಿನ ಶಿಶು
ಕಟ್ಟಿದೆನು ಜಗಕ್ಕೆ ಬಿರಿದನು.

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಗೆ
ಇಕ್ಕಿದೆನು ಕಾಲಲಿ ತೊಡರನು.

ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ನಿನ್ನ ಕೊಲುವೆ ಗೆಲುವೆ ಶಿವಶರಣೆಂಬ ಅಲಗ ಕೊಂಡು.

ಬಿಡು ಬಿಡು ಕರ್ಮವೆ, ನಿನ್ನ ಕೊಲ್ಲದೆ ಮಾಣೆನು.
ಕೆಡಹಿಸಿಕೊಳ್ಳದೆನ್ನ ನುಡಿಯ ಕೇಳಾ.

ಕೆಡದ ಶಿವಶರಣೆಂಬ ಅಲಗನೆ ಕೊಂಡು
ನಿನ್ನ ಕೊಲುವೆ ಗೆಲುವೆ ನಾನು.

ಬ್ರಹ್ಮಪಾಶವೆಂಬ ಕಳನನೆ ಸವರಿ,
ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ,
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯತಲೆದೂಗಲಿ ಕಾದುವೆನು ನಾನು.

Leave a Comment

Your email address will not be published. Required fields are marked *