ಭಾಗ್ಯದ ಲಕ್ಷ್ಮಿ ಬಾರಮ್ಮ| ನಮ್ಮಮ್ಮ ನೀ ಸೌ-
ಭಾಗ್ಯದ ಲಕ್ಷ್ಮಿ ಬಾರಮ್ಮ||
ಗೆಜ್ಜೆ ಕಾಲ್ಗಳ ಧ್ವನಿಯನು ತೋರುತ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಸಜ್ಜನ ಸಾಧು ಪೂಜೆಯ ಮೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ||
ಕನಕವೃಷ್ಟಿಯ ಕರೆಯುತ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ||
ಅತ್ತಿತ್ತಗಲದೆ ಭಕ್ತರ ಮನೆಯಲಿ
ನಿತ್ಯಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುವ ಸಾಧುಸಜ್ಜನರ
ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ||
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯನು ತಿರುವುತ ಬಾರೆ
ಕುಂಕುಮಾಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ||
ಸಕ್ಕರೆ ತುಪ್ಪ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿರಂಗನ
ಚೊಕ್ಕ ಪುರಂದರ ವಿಟ್ಠಲನ ರಾಣಿ||
—-ಪುರಂದರದಾಸ